ನಿಮರ್ಟಿಯ - 
	ಏಸೀಲಮೇಟ (ದೇಹಾವಕಾಶ ರಹಿತ) ವಿಭಾಗಕ್ಕೆ ಸೇರಿದ ಜೀವಿಗಳು. ಮೃದುವಾದ, ತೆಳುವಾದ, ಚಪ್ಪಟೆಯಾದ, ಖಂಡಮಯವಲ್ಲದ ದೇಹವುಳ್ಳ ಹುಳುಗಳನ್ನು ಒಳಗೊಂಡಿವೆ. ಈ ಹುಳುಗಳ ದೇಹ ಅತಿ ಉದ್ದವಾಗುವ ಮತ್ತು ಸಂಕುಚಿಸುವ ಸಾಮಥ್ರ್ಯವುಳ್ಳದ್ದು. ಕೆಲವು 5 ಮಿಮೀ.ನಷ್ಟು ಚಿಕ್ಕವಿದ್ದರೆ ಮತ್ತೆ ಕೆಲವು 25 ಮೀ. ಗಳಷ್ಟು ಉದ್ದವಾಗಿರುವುವು. ಈ ವಿಭಾಗದಲ್ಲಿ ಸುಮಾರು 500 ಪ್ರಭೇದಗಳಿವೆ. ಕೆಂಪು, ಹಳದಿ, ಕಂದು, ಬಿಳಿ, ಹಸಿರು ಮತ್ತು ವಿವಿಧ ಬಣ್ಣಗಳ ಜೀವಿಗಳಿವು; ಸಾಮಾನ್ಯವಾಗಿ ಕಡಲವಾಸಿಗಳು. ಕಲ್ಲಿನ ತಳದಲ್ಲಿ ಪಾಚಿಯ ನಡುವೆ ಅಥವಾ ಮರಳಿನ ಬೊಕ್ಕೆಗಳಲ್ಲಿ ಸುರುಳಿಗಟ್ಟಿಕೊಂಡು ಜೀವಿಸುವುವು. ಕೆಲವು ಸಮುದ್ರದ ಆಳದಲ್ಲಿ ಜೀವಿಸುವುವು. ಪ್ರೋಸ್ಟೋಮ ಎಂಬ ಜಾತಿಯ ಹುಳು ಸಿಹಿನೀರಿನಲ್ಲಿಯೂ ಉಷ್ಣವಲಯದಲ್ಲಿನ ಜಿಯೊನಿಮರ್ಟಿಸ್ ಎಂಬುದು ಜೌಗುಮಣ್ಣಿನಲ್ಲಿಯೂ ಕಾರ್ಸಿಕೊನಿಮರ್ಟಿಸ್ ಎಂಬುದು ಸಮುದ್ರದಲ್ಲಿ ಜೀವಿಸುವ ಏಡಿಗಳ ಮೊಟ್ಟೆಗಳ ಗುಂಪುಗಳಲ್ಲಿ ಅಥವಾ ಕಿವಿರುಗಳಲ್ಲೂ ಮಾಲಕಾಬ್ಡೆಲ ಎಂಬುದು ಇಚ್ಚಿಪ್ಪು ಪೋಷಕ ಜೀವಿಗಳ ಮ್ಯಾಂಟಲ್ ಕುಹರದಲ್ಲಿಯೂ ಜೀವಿಸುವುವು.

	ನಿಮರ್ಟಿಯ ವಿಭಾಗದ ಪ್ರಾಣಿಗಳ ಹೊರಚರ್ಮ ಮೃದುವಾಗಿರುವುದು. ಶಿಲಕೆಗಳುಳ್ಳ ಲೋಳೆಪದಾರ್ಧ ಸ್ರವಿಸುವ ಮತ್ತು ಸೂಕ್ಷ್ಮವೇದಿ ಕಣಗಳುಳ್ಳ ಹೊರದರ್ಮವಿದೆ. ಇದರ ಒಳಗೆ ವರ್ತುಲ ಹಾಗೂ ನೀಳ ಅಚ್ಚಿನ ಸ್ನಾಯುಗಳಿವೆ. ಶಿಲಕೆಗಳ ಹೊದಿಕೆಯ ಸಹಾಯದಿಂದ ಇವು ಚಲಿಸುವುವು. ಬಾಯಿಯ ಮೇಲ್ಭಾಗದಲ್ಲಿ ಮತ್ತು ದೇಹದ ಮುಂತುದಿಯಲ್ಲಿ ಒಂದು ದ್ವಾರವಿರುವುದು. ಇದರಲ್ಲಿ ಮೃದುವಾದ ಹೀರುಕೊಳವೆಯುಂಟು. ದೇಹದೊಳಗಿನ ಒಂದು ಚೀಲದಲ್ಲಿ ಹೀರುಕೊಳವೆ ಅಡಗಿರುತ್ತದೆ. ಇದರ ಮೇಲೆ ಸಣ್ಣ ಸಣ್ಣ ಮುಳ್ಳನಂಥ ರಚನೆಗಳಿರುವುದರಿಂದ ಸ್ವರಕ್ಷಣೆಗೂ ಆಕ್ರಮಣಕ್ಕೂ ಇದರಿಂದ ಅನುಕೂಲ. ಜೀರ್ಣನಾಳ ದೇಹದ ಉದ್ದಕ್ಕೂ ಹರಡಿದೆ. ನಾಳದ ಒಳಭಾಗ ಶಿಲಕೆಗಳಿಂದ ಕೂಡಿದೆ. ಮತ್ತು ಇದರ ಇಕ್ಕೆಡೆಗಳಲ್ಲಿ ಸಣ್ಣ ಕುಡಿಗಳುಂಟು. ಇತರ ಸಣ್ಣಪುಟ್ಟ ಪ್ರಾಣಿಗಳು ಅಥವಾ ಸಸ್ಯಜೀವಿಗಳು ನಿಮರ್ಟಿಯಗಳ ಆಹಾರ. ದೇಹದ ಇಕ್ಕೆಡೆಗಳಲ್ಲಿ ನೀಳವಾದ ಎರಡು ರಕ್ತನಾಳಗಳು ಹಾಗೂ ದೇಹದ ಉದ್ದಕ್ಕೂ ಚಾಚಿರುವ ಒಂದು ಊದ್ರ್ವ ರಕ್ತನಾಳ ಉಂಟು. ದೇಹದ ಮುಂದಿನ ಭಾಗದಲ್ಲಿ ಮತ್ತು ಜೀರ್ಣನಾಳದ ಸುತ್ತ ಇವುಗಳನ್ನು ಸಂಬಂಧಿಸುವ ಅಡ್ಡರಕ್ತನಾಳಗಳು ಇವೆ. ರಕ್ತ ಕೆಂಪು ಬಣ್ಣದ್ದಾಗಿರಬಹುದು ಅಥವಾ ವರ್ಣರಹಿತವಾಗಿರಬಹುದು. ನಿರ್ದಿಷ್ಟವಾದ ಶ್ವಾಸಾಂಗಗಳಿಲ್ಲ. ಅನಿಲಗಳ ವಿನಿಮಯ ನಡೆಯುವುದು ಚರ್ಮದ ಮೂಲಕ. ದೇಹದೊಳಗೆ ಇಕ್ಕೆಡೆಯಲ್ಲಿ ನೀಳವಾದ ಹಾಗೂ ಕವಲೊಡೆದ ನಾಳಗಳಿರುವುವು. ಇವುಗಳ ತುದಿಯಲ್ಲಿರುವ ಜ್ವಾಲಾಕೋಶಗಳು (ಫ್ಲೇಮ್ ಸೆಲ್ಸ್) ರಕ್ತನಾಳಗಳ ಬಳಿ ಹರಡಿರುತ್ತವೆ. ದೇಹದ ಚರ್ಮಕ್ಕೂ ಒಳಗಿನ ಅಂಗಗಳಿಗೂ ನಡುವೆ ಇರುವ ಅವಕಾಶದಲ್ಲಿ ಪರೆಂಕಿಮ ಕೋಶಗಳು ತುಂಬಿಕೊಂಡಿವೆ. ತಲೆಯಲ್ಲಿ ಎರಡು ದೊಡ್ಡ ನರಮುಡಿಗಳಿವೆ. ಇವುಗಳನ್ನು ನರತಂತು ಒಟ್ಟುಗೂಡಿಸುವುದು. ಈ ನರಮುಡಿಗಳು ಹೀರುಕೊಳವೆಗೆ ನರಗಳನ್ನು ಒದಗಿಸುತ್ತವೆ. ಇಕ್ಕೆಡೆಯಲ್ಲಿಯೂ ನೀಳವಾದ ಎರಡು ನರಗಳಿವೆ. ಇವುಗಳ ಮೇಲೆ ನರಮುಡಿಗಳು ಮತ್ತು ಇವುಗಳಿಗೆ ಸಂಬಂಧ ಕಲ್ಪಿಸುವ ಅಡ್ಡನರಗಳು ಉಂಟು. ಕಣ್ಣುಗಳು ಸರಳರೀತಿಯವು. ತಲೆಯ ಮೇಲೆ ಮತ್ತು ದೇಹದ ಇಕ್ಕೆಡೆಗಳಲ್ಲಿ ಸೂಕ್ಷ್ಮಗ್ರಾಹಿ ಇಂದ್ರಿಯಗಳುಂಟು.

	ಈ ಜೀವಿಗಳು ಸಾಧಾರಣವಾಗಿ ಏಕಲಿಂಗಿಗಳು. ಜನನೇಂದ್ರಿಯಗಳು ಪರೆಂಕಿಮದಲ್ಲಿ ಹುದುಗಿವೆ. ಪ್ರಜನನ ಜೀವಕಣಗಳು ದೇಹದ ಚರ್ಮವನ್ನು ಭೇದಿಸಿ ಹೊರಬರುವುವು. ಲಿನಿಯೈಡೀ ಕುಟುಂಬದ ಪ್ರಾಣಿಗಳಲ್ಲಿ ಪೈಲಿಡಿಯಮ್ ಡಿಂಬಾವಸ್ಥೆ ಕಂಡುಬರುವುದು. ಉಳಿದವುಗಳಲ್ಲಿ ಡಿಂಬಾವಸ್ಥೆಯಿಲ್ಲ. ಭ್ರೂಣ ನೇರವಾಗಿ ಬೆಳೆದು ಮರಿಯಾಗುವುವು.

	ಪ್ರೌಢಜೀವಿಗೆ ಪುನರುತ್ಪಾದನಾ ಸಾಮಥ್ರ್ಯವುಂಟು. ದೇಹ ಅನೇಕ ತುಂಡುಗಳಾಗಿ ಒಡೆದು ಪ್ರತಿ ಒಂದು ತುಂಡೂ ಒಂದೊಂದು ಪೂರ್ಣ ಜೀವಿಯಾಗಿ ವೃದ್ಧಿಸುವುವು.

	ಈ ಜೀವಿಗಳನ್ನು ಚಪ್ಪಟೆ ಹುಳುಗಳ ವಂಶಕ್ಕೆ (ಪ್ಲಾಟಿಹೆಲ್ಮಿಂತೀಸ್) ಸೇರಿಸುವುದುಂಟು. ಚರ್ಮ ಹಾಗೂ ನರಮಂಡಲಗಳ ರಚನೆ, ಜ್ವಾಲಾಕೋಶಗಳು ಖಂಡರಹಿತಸ್ಥಿತಿ-ಇವುಗಳಲ್ಲಿ ನಿರ್ಮಟಿಯಗಳಿಗೂ ಚಪ್ಪಟೆಹುಳುಗಳಿಗೂ ಸಾಮ್ಯ ಉಂಟು. ಆದರೆ ಬಾಯಿ ಮತ್ತು ಆಸನದ್ವಾರವಿರುವ ಜೀರ್ಣನಾಳ, ಸರಳ ರಚನೆಯ ಜನನೇಂದ್ರಿಯಗಳು, ಏಕಲಿಂಗತೆ-ಈ ಗುಣಲಕ್ಷಣಗಳಿಂದ ನಿಮರ್ಟಿಯಗಳು ಚಪ್ಪಟೆ ಹುಳುಗಳಿಂದ ಬೇರೆಯಾಗಿವೆ.

	ನಿಮರ್ಟಿಯನ್ನು ಆನೋಪ್ಲ ಮತ್ತು ಈನೋಪ್ಲ ಎಂಬ ಎರಡು ವರ್ಗಗಳಾಗಿ ವಿಂಗಡಿಸಲಾಗಿದೆ.
(ಪಿ.ಎ.ಆರ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ